ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು:

ಭಾರತದಲ್ಲಿ ಮುಸ್ಲಿಮರು ಸುರಕ್ಷಿತರೇ.?
May 22, 1987 ಇತಿಹಾಸ ಕಂಡ ಅತ್ಯಂತ ಕ್ರೂರ ಕಸ್ಟೊಡಿಯಲ್ (ವಿಚಾರಣಾಧೀನ ಕೈದಿಗಳ) ಕಗ್ಗೊಲೆಯಾಗಿದ್ದರೂ ಹಾಶಿಂಪುರ ಹತ್ಯಾಕಾಂಡ ಚರ್ಚೆಯಾಗಿದ್ದು ಬಹಳ ಕಡಿಮೆ. ಸ್ವತಂತ್ರಭಾರತದಲ್ಲಿ, ಪ್ರಜಾಪ್ರಭುತ್ವದ ಅಡಿಯಲ್ಲೇ ಅಸಾಂವಿಧಾನಿಕವಾಗಿ ಈ ಸೇಡಿನ ಕಗ್ಗೊಲೆಗಳು ನಡೆದು ಇಂದಿಗೆ 31 ವರ್ಷಗಳು ತುಂಬಿದವು. ಅದರ ಸಂಭ್ರಮಾಚರಣೆ ಅನ್ನುವಂತೆ ಮುಸ್ಲಿಂ ಪ್ರಜೆಗಳ ಮೇಲೆ ಹತ್ತುಹಲವು ನೆವ ತೆಗೆದು ಹಲ್ಲೆ - ಹತ್ಯೆಗಳನ್ನು ನಡೆಸಲಾಗುತ್ತಿದೆ.

ರಂಜಾನ್ ತಿಂಗಳ ಶುಕ್ರವಾರ; ಉಪವಾಸ ಮುರಿಯಲು ಸಿದ್ಧರಾಗಿದ್ದ ಮನೆಯ ಗಂಡಸರನ್ನು ಎಳೆದೊಯ್ದು, ಅವರು ವಾರ ಕಳೆದರೂ ಮರಳದೆಹೋದಾಗ, ಎಂಟನೇ ದಿನ ಕಾಲುವೆಯಲ್ಲಿ ಅವರ ಕೊಳೆತ ಹೆಣಗಳು ಕಂಡಾಗ ಹೇಗಾಗುತ್ತದೆ? ಆ ಹೊತ್ತು ಒಡೆದ ಎದೆಗಳ ಸದ್ದು ಹಾಶಿಂಪುರದಲ್ಲಿ ಇವತ್ತಿಗೂ ಕೇಳಿಸುತ್ತಿದೆ.

1987ರ ಮೇ 22 ರಂದು ಇಂಥದೊಂದು ಸನ್ನಿವೇಶ ಎದುರಿಸಿದ್ದವು ಉತ್ತರಪ್ರದೇಶದ ಹಾಶಿಂಪುರದ ಮುಸ್ಲಿಂ ಕುಟುಂಬಗಳು. ವಿಚಾರಣೆ ನೆವದಲ್ಲಿ ಹೆಚ್ಚೂಕಡಿಮೆ ಊರಿನ ಮುಸ್ಲಿಂ ಗಂಡಸರನ್ನೆಲ್ಲ ಬಲಾತ್ಕಾರವಾಗಿ ವ್ಯಾನ್ಗಳಲ್ಲಿ ತುಂಬಿಸಿ ಕೊಂಡೊಯ್ದ ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಪಡೆಯ (ಪಿಎಸಿ) ಸಿಬ್ಬಂದಿ 42 ಮಂದಿಯನ್ನು ಕೊಂದುಹಾಕಿದ್ದರು. ಹತ್ಯಾಕಾಂಡ ನಡೆದು 28 ವರ್ಷಗಳು ಕಳೆದ ನಂತರ, 2015ರ ಮಾರ್ಚ್ ತಿಂಗಳಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಪ್ರಕರಣದ ಎಲ್ಲ 16 ಆರೋಪಿಗಳನ್ನೂ ಖುಲಾಸೆಗೊಳಿಸಿ ತೀರ್ಪು ನೀಡಿತು. ಅಲ್ಲಿಯವರೆಗೆ ಕೂಡ ಈ ಹತ್ಯಾಕಾಂಡ ಚರ್ಚೆಯಾಗಿದ್ದು ಕಡಿಮೆಯೇ. ಈಗಂತೂ ಅದು ಸಂಪೂರ್ಣ ಸ್ಮೃತಿಪಟಲದಿಂದ ಅಳಿಸಿಯೇಹೋಗಿದೆ.

ಸ್ವಾತಂತ್ರ್ಯ ಸಂದರ್ಭದ ವಿಭಜನೆಗೆ ಸಂಬಂಧಿಸಿದಂತೆ ನಡೆದ ಗಲಭೆಗಳ ನಂತರ ಇಂಡಿಯಾದಲ್ಲಿ ಕೋಮು ದಳ್ಳುರಿ ಹೊತ್ತಿಕೊಂಡಿದ್ದೇ ರಾಮಜನ್ಮಭೂಮಿ ವಿವಾದದಿಂದ. 1986ರಲ್ಲಿ ರಾಜೀವ್ ಗಾಂದಿ ಸರ್ಕಾರದ ಆಸಕ್ತಿಯ ಮೇರೆಗೆ, ಬಾಬರಿ ಮಸೀದಿಯನ್ನು ಹಿಂದೂಗಳ ಪೂಜೆಗೆ ತೆರವುಗೊಳಿಸಬೇಕೆಂದು ಕೋರ್ಟ್ ಒಂದು ತೀರ್ಪು ನೀಡಿತು. ಅದನ್ನು ಹಿಂಬಾಲಿಸಿ 1987ರ ಏಪ್ರಿಲ್ – ಮೇ ತಿಂಗಳಲ್ಲಿ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿರುವ ಮೀರತ್ ಬಳಿ ಇರುವ ಹಾಶಿಂಪುರದಲ್ಲಿ ಕೋಮುದಳ್ಳುರಿ ಹೊತ್ತಿಕೊಂಡಿತ್ತು. ಈ ಗಲಭೆಯಲ್ಲಿ 10 ಜನರ ಪ್ರಾಣವೂ ತೀರಿತ್ತು. ಇದನ್ನು ಹತ್ತಿಕ್ಕಲು ಅಂದಿನ ಕಾಂಗ್ರೆಸ್ಸಿನ ವೀರ್ ಬಹಾದ್ದೂರ್ ಸರ್ಕಾರ ಪೊಲೀಸರ ಜೊತೆಗೆ ಪ್ರಾಂತೀಯ ಸಶಸ್ತ್ರ ಪಡೆಯ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗಿತ್ತು. ಮೇ 19ರಿಂದ ಅನಿರ್ದಿಷ್ಟಾವಧಿ ನಿಷೇಧಾಜ್ಞೆಯನ್ನೂ ಹೇರಲಾಗಿತ್ತು.

1987ರ ಮೇ 19ರಂದು ಪ್ರಭಾತ್ ಕೌಶಿಕ್ ಎಂಬ ಆರೆಸ್ಸೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗುವುದರೊಂದಿಗೆ ಗಲಭೆ ಹೊತ್ತುರಿಯತೊಡಗಿತು. ಇದೊಂದು ಉದ್ದೇಶಪೂರ್ವಕ ಕೊಲೆಯಾಗಿದ್ದು, ಹಾಶಿಂಪುರದ ಮುಸ್ಲಿಮರು ಇದರ ಹಿಂದೆ ಇದ್ದಾರೆಂಬ ವದಂತಿ ಹಬ್ಬಿತು. ಮೃತ ಪ್ರಭಾತ್ ಕೌಶಿಕ್’ನ ಸಹೋದರ ಮೇಜರ್ ಸತೀಶ್ ಚಂದ್ರ ಕೌಶಿಕ್ ರಂಗ ಪ್ರವೇಶಿಸಿ ಸೇಡು ತೀರಿಸಿಕೊಳ್ಳಲು ಮುಂದಾದರು.
(ಆದರೆ ಈ ಮನುಷ್ಯನ ಹೆಸರು ಎಲ್ಲಿಯೂ ಬಹಿರಂಗವಾಗಿ ಕಾಣದಂತೆ ನೋಡಿಕೊಳ್ಳಲಾಗಿದೆ. ಇತ್ತೀಚೆಗೊಮ್ಮೆ ಆತನ ಅತ್ತೆಯೇ ತನ್ನ ಅಳಿಯನ ಕೊಲೆಗೆ ಆತನ ಸಹೋದರ ಸರಿಯಾಗಿ ಸೇಡುತೀರಿಸಿಕೊಂಡ ಎಂದು ಹೇಳಿದ್ದೊಂದೇ ಅಧಿಕೃತ ಆಧಾರ.)

ನಡೆದದ್ದೇನು?

ಮೇ 22ರ ಶುಕ್ರವಾರ ರಂಜಾನ್ ಉಪವಾಸ ತೊರೆಯಲು ಅಣಿಯಾಗುತ್ತಿದ್ದ ಮುಸ್ಲಿಮ್ ಪುರುಷರನ್ನು ವಿಚಾರಣೆಗೆ ಎಳೆತರಲು ಸ್ಥಳೀಯ ಅಧಿಕಾರಗಳ ಮೂಲಕ ಆದೇಶ ಹೊರಡಿಸಿದರು ಕೌಶಿಕ್. ಅದರಂತೆ PAC ಸಿಬ್ಬಂದಿ ಮಕ್ಕಳನ್ನೂ ಮುದುಕರನ್ನೂ ವಾಪಸು ಕಳಿಸಿ ಬಾಕಿ ಯುವಕರನ್ನು ಟ್ರಕ್’ಗಳಲ್ಲಿ ತುಂಬಿಸಿಕೊಂಡು ಹೋದರು. ಊರಿನ ಜನ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ, ಮರಳಿ ಬರುತ್ತಾರೆಂದು ಕಾದಿದ್ದೇ ಬಂತು. ಆದರೆ ಕಂಡದ್ದು ಕಾಲುವೆಯಲ್ಲಿ ರಕ್ತಸಿಕ್ತ ಹೆಣಗಳು.

ಮುಸ್ಲಿಂ ಯುವಕರನ್ನು ಸಾಮೂಹಿಕವಾಗಿ ಮುರಾದಾಬಾದ್ - ಗಾಝಿಯಾಬಾದ್ ರಸ್ತೆಯ ಮುರಾದ್ ನಗರದ ಅಪ್ಪರ್ ಗಂಗಾ ಕಾಲುವೆಯ ಬಳಿ ಎಸೆದು ಅವರು ಏಳುವ ಮೊದಲೇ ಗುಂಡೇಟು ಹೊಡೆದು ಕೊಲ್ಲಲಾಯ್ತು. ಕೆಲವರು ತಮ್ಮನ್ನು ರಕ್ಷಿಸಿಕೊಳ್ಳಲು ಕಾಲುವೆಗೆ ನೆಗೆದರು. ಅಲ್ಲಿಯೂ ಗುಂಡು ಹಿಂಬಾಲಿಸಿತು. ರಕ್ತವೇ ನೀರಾಗಿ ಹರಿಯಿತು. ಟ್ರಕ್ಕಿನಲ್ಲಿ ಬಾಕಿ ಉಳಿದವರನ್ನು ಮಂಕ್‍ಪುರ್ ಗ್ರಾಮದ ಹಿಂದೋನ್ ನದಿ ದಡಕ್ಕೆ ಕೊಂಡೊಯ್ದು ಹಿಂದಿನ ರೀತಿಯೇ ಅವರಿಗೂ ಗುಂಡಿಟ್ಟು ನದಿಗೆ ಎಸೆಯಲಾಯಿತು. ಹಾಶಿಂಪುರದ ಜನತೆಗೆ ಈ ಹತ್ಯಾಕಾಂಡದ ಸುಳಿವು ಸಿಕ್ಕಿದ್ದು 7 ದಿನಗಳ ನಂತರವಷ್ಟೇ. 

ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ನಾವು ಕೇಳಿದ್ದೇವೆ. ಜನರಲ್ ಡೈರನ ಸಿಬ್ಬಂದಿಯ ಗುಂಡೇಟು ತಪ್ಪಿಸಿಕೊಳ್ಳಲು ಜನ ಬಾವಿಗೆ ಹಾರಿ ಅಲ್ಲಿಯೂ ಉಸಿರು ಉಳಿಸಿಕೊಳ್ಳಲಾಗದೆ ಪ್ರಾಣತೆತ್ತ ಬಗ್ಗೆ ಓದಿದ್ದೇವೆ. ಅಂಥದ್ದೇ ಅಮಾನವೀಯ ಹತ್ಯಾಕಾಂಡ ಸ್ವತಂತ್ರ ಭಾರತದಲ್ಲಿ, ಅದೂ 80ರ ದಶಕದಲ್ಲಿ ನಡೆಯಿತೆಂದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಇದೆಯೆ? ಈ ಹತ್ಯಾಕಾಂಡದ ಆರೋಪಿಗಳನ್ನು ಬಚಾವು ಮಾಡಲು ರಾಜ್ – ಕೇಂದ್ರ ಸರ್ಕಾರಗಳು ನಡೆಸಿದ ಕಸರತ್ತುಗಳು ಇನ್ನೊಂದು ಅಸಹ್ಯಕರ ಅಧ್ಯಾಯ. 
ಈ ಹತ್ಯಾಕಾಂಡದಲ್ಲಿ ಸತ್ತಂತೆ ನಟಿಸಿ ಪಾರಾದ ಇಬ್ಬರು ಯುವಕರಷ್ಟೇ ಇಡಿಯ ಘಟನೆಗೆ ಸಾಕ್ಷಿ.

#ಸಾಕ್ಷಿ ಇದ್ದೂ ಸಾಬೀತುಮಾಡಲಾಗದ ಸೋಲು
ವಿಚಾರಣೆಗೆಂದು ಮುಸ್ಲಿಮರನ್ನು ತುಂಬಿಕೊಂಡು ಹೋದ ಸುದ್ದಿ ತಿಳಿದು ಮೀರತ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಭೂತಿ ನಾರಾಯಣ್ ರಾಯ್ ಜಿಲ್ಲಾಧಿ ಕಾರಿ ನಸೀಮ್ ಝೈದಿಯವರನ್ನು ಕರೆದುಕೊಂಡು ಟ್ರಕ್ ಹೋದ ದಾರಿಯಲ್ಲಿ ಸಂಚರಿಸಿದಾಗ ಬಾಬುದ್ದೀನ್ ಎಂಬ ಯುವಕನ ನರಳಾಟ ಕೇಳಿಸಿತ್ತು. ಆತನ ವಿಶ್ವಾಸ ಗಳಿಸಿ ನಡೆದುದೆಲ್ಲವನ್ನೂ ತಿಳಿದುಕೊಂಡ ರಾಯ್, ಹಾಶಿಂಪುರ ಹತ್ಯಾಕಾಂಡದ ಅಸಲು ಮುಖವನ್ನು Hashimpura 22 may ಎಂಬ ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕವನ್ನು ಬರೆಯಲು ಅವರು ತೆಗೆದುಕೊಂಡದ್ದು 3 ದಶಕಗಳ ಅವಧಿಯನ್ನು. ಹಾದುಬಂದದ್ದು ಬೆದರಿಕೆಗಳ ಮಹಾಪರ್ವವನ್ನು.

ಜೀವ ಉಳಿಸಿಕೊಂಡ ಸಂತ್ರಸ್ತನಿಂದ ಮಾಹಿತಿ ಕಲೆಹಾಕಿದ ನಂತರ ಸಭೆ ಕರೆದ ಎಸ್ಪಿ ರಾಯ್,  ಅಪರಾಧಿಗಳನ್ನು ಬಂಧಿಸಬೇಕು, ಸಾಕ್ಷ್ಯ ನಾಶ ಮಾಡುವ ಮೊದಲು ಅದನ್ನು ಶೇಖರಿಸಬೇಕು ಎಂದು ಆಗ್ರಹಿಸಿದರೆ ಅಂದಿನ ಮುಖ್ಯಮಂತ್ರಿ ಮತ್ತು ಹೆಚ್ಚಿನ ಅಧಿಕಾರಿಗಳು ಸಮ್ಮತಿ ನೀಡದೆ ಅಸಹಕಾರ ತೋರಿದರು. ರಾಯ್ ಮತ್ತು ಜಿಲ್ಲಾಧಿಕಾರಿ ನಸೀಮ್ ಝೈದಿ ಪಿ.ಎ.ಸಿ. ಹೆಡ್ ಕ್ವಾರ್ಟರ್ಸ್‍ಗೆ ಹೋದಾಗ ಯುವಕರನ್ನು ತುಂಬಿ ಕೊಂಡು ಹೋದ ಹಳದಿ ಟ್ರಕ್ ಅಲ್ಲಿಯೇ ಇತ್ತು. ಅದರೊಳಗೆ ಮಡುಗಟ್ಟಿದ ರಕ್ತವನ್ನು ತೊಳೆದು ಶುದ್ಧೀಕರಿಸಲು ನಡೆಸಿದ ಪ್ರಯತ್ನದ ಗುರುತೂ ಇತ್ತು. ಈ ಕುರಿತು ಪ್ರಶ್ನೆಗಳನ್ನೆತ್ತಿದ ರಾಯ್ ಅವರನ್ನು ವರ್ಗಾವಣೆ ಮಾಡಿದ್ದು ಮಾತ್ರವಲ್ಲ, ತಿಂಗಳುಗಟ್ಟಲೆ ಯಾವ ಕೆಲಸವನ್ನೂ ವಹಿಸದೆ ಅವಮಾನಗೊಳಿಸಲಾಯ್ತು. ಉತ್ತರ ಪ್ರದೇಶ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಕಣ್ಣುಮುಚ್ಚಿಕೊಂಡು ನೋಡಿತು. ಮುಖ್ಯಮಂತ್ರಿ ವೀರ್ ಬಹಾದ್ದೂರ್ ಅಂತೂ 42 ಯುವಕರ ಕೊಲೆಯಾಗಿದೆ ಅನ್ನುವುದನ್ನೇ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಮೃತರ ಡೆತ್ ಸರ್ಟಿಫಿಕೇಟ್ ಪಡೆಯಲು ಪೀಪಲ್ಸ್ ಯೂನಿಯನ್ ಫಾರ್ ಡೆಮಕ್ರಾಟಿಕ್ ರೈಟ್ಸ್ ಸುಪ್ರೀಂ ಕೋರ್ಟಿನಲ್ಲಿ ಬಡಿದಾಡಬೇಕಾಯ್ತು. ಚಳವಳಿಗಾರರ ಒತ್ತಾಯದ ಮೇರೆಗೆ ಸಿಐಡಿಗೆ ಪ್ರಕರಣದ ಹೊಣೆ ಹೊರೆಸಿದ ಮೇಲಂತೂ ಪ್ರಕರಣ ಸಂಪೂರ್ಣ ಹಳ್ಳಹಿಡಿಯಿತು. ಸಾಕ್ಷಿಗಳು ನಾಶವಾದವು. ನ್ಯಾಯಾಲಯದಲ್ಲಿ ಪ್ರಕರಣ ನಿಲ್ಲಲಿಲ್ಲ. 2015ರ ಮಾರ್ಚ್ ತಿಂಗಳಲ್ಲಿ ಹಾಶಿಂಪುರ ಭೀಕರ ಹತ್ಯಾಕಾಂಡದ ಎಲ್ಲ ಆರೋಪಿಗಳು ಖುಲಾಸೆಗೊಂಡರು.

ಸ್ವತಂತ್ರಭಾರತದಲ್ಲಿ, ಪ್ರಜಾಪ್ರಭುತ್ವದ ಅಡಿಯಲ್ಲೇ ಅಸಾಂವಿಧಾನಿಕವಾಗಿ ಸೇಡಿನ ಕಗ್ಗೊಲೆ ನಡೆದು ಇಂದಿಗೆ 31ವರ್ಷಗಳು ತುಂಬಿದವು. ಅದರ ಸಂಭ್ರಮಾಚರಣೆ ಅನ್ನುವಂತೆ ಮುಸ್ಲಿಂ ಪ್ರಜೆಗಳ ಮೇಲೆ ಹತ್ತುಹಲವು ನೆವ ತೆಗೆದು ಹಲ್ಲೆ - ಹತ್ಯೆಗಳನ್ನು ನಡೆಸಲಾಗುತ್ತಿದೆ.

ನ್ಯಾಯ_ಎಲ್ಲಿದೆ?

Comments

Popular posts from this blog

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

ಭಯದ ಮಾರಾಟಗಾರ ಟಿವಿ ಆಂಕ್ಯರ್..!